Saturday, September 20, 2008

ಅಭ್ಯಂಜನ

ವಾರವಾಯ್ತು. ಹೌದು, ಇವತ್ತಾದರೂ ತಲೆಗೆ ಸ್ನಾನ ಮಾಡ್ಬೇಕು. ಮಾಡ್ಲೇಬೇಕು. ಆದ್ರೂ. . ಯಾಕೋ, ಮನಸ್ಸಿಲ್ಲ. ತಲೆಗೊಂದಿಷ್ಟು ಎಣ್ಣೆ ಹಚ್ಚಿದ ಶಾಸ್ತ್ರ ಮಾಡಿ, ಗೀಜರಿನಲ್ಲಿ ನೀರು ಬಿಟ್ಟು, ಒಂದರ ನಂತರ ಒಂದು ಬಕೆಟ್ಟಿನಲ್ಲಿ ನೀರು ತುಂಬಲು ಕಾದು. . .ಹೊರಗೆ ಜಿಟಿ ಜಿಟಿ ಮಳೆ, ಥಂಡಿ. ಎರಡನೆಯ ಬಕೆಟ್ ತುಂಬುವುದರಲ್ಲಿ ಮೊದಲನೆಯ ಬಕೆಟ್ಟಿನ ನೀರು ತ...ಣ್ಣಗೆ. ಹತ್ತು ನಿಮಿಷದಲ್ಲಿ ಸ್ನಾನವಾಗಬೇಕು ಇಲ್ಲದಿದ್ದರೆ ಕೆಲಸದವಳು ಬಂದು ಹೋದಾಳು.

ಬೆಳಗ್ಗೆ ಎದ್ದಾಕ್ಷಣ ಅಜ್ಜಿ ಬೊಗಸೆಯಷ್ಟು ಹರಳೆಣ್ಣೆಯನ್ನು ನೆತ್ತಿಗೆ ಒತ್ತಿದ್ದರು. ತಿಂಡಿಯಾದ ನಂತರ ಕೆಲವು ಸಮಯದ ಬಳಿಕ ಅಭ್ಯಂಜನ. ಅದುವರೆಗೆ ಎಣ್ಣೆ, ಮೂಗು ಮತ್ತು ಹೆಕ್ಕತ್ತಿಗಿಳಿದು, ಕಣ್ಣೊಳಗೆ ಹರಿದು, ಉರಿ, ರಂಪ-ರಾದ್ಧಾಂತ. ಮನೆಯವರ ಸ್ನಾನಗಳೆಲ್ಲಾ ಮುಗಿದಿದ್ದರಿಂದ ನಿರುಮ್ಮಳವಾಗಿ ಸ್ನಾನದ ಮನೆಯೆಡೆ ಪಯಣ. ಹಂಡೆಯಲ್ಲಿ ಕೊತ ಕೊತ ಕುದಿಯುವ ನೀರು. ಒಲೆಯಲ್ಲಿ ಧಗ ಧಗ ಉರಿಯುವ ಬೆಂಕಿಯ ಉರಿಯಿಂದ ಒಳಗೆಲ್ಲಾ ಕೆಂಬೆಳಕು. ಗಾಳಿಗೆ ಉರಿ ಹೊಯ್ದಾಡಿದಾಗಲಿಲ್ಲ ಗೋಡೆಯ ಮೇಲೆಲ್ಲ ಚಿತ್ರ ವಿಚಿತ್ರವಾದ ನೆರಳಿನಾಟ- 'ಬಾಲ ನಾಗಮ್ಮ'ನ ಮಂತ್ರವಾದಿಯ ಗುಹೆಯಂತೆ. ಹೆಂಚಿನ ಸಂದಿಯಿಂದ ನುಸುಳಿದ ಬೆಳಕಿನ ಕೋಲುಗಳು ಬರೆದ ಚಿತ್ತಾರ. ಒಂದು ಮೂಲೆಯಲ್ಲಿ ಸೌದೆ, ಒಣಗಿದ ತೆಂಗಿನ ಸೋಗು, ಕರಟ ಇತ್ಯಾದಿ ಇತ್ಯಾದಿ. ಇನ್ನೊಂದು ಮೂಲೆಯಲ್ಲಿ. . ಅಸ್ಪಷ್ಟ, ಬೆಳಕಿಗೆ ದಾರಿ ತಪ್ಪಿಸಬಲ್ಲಷ್ಟು ವಿಶಾಲವಾದ ಬೆಚ್ಚಗಿನ ಸ್ನಾನದ ಮನೆ. ಇನ್ನು ಒಲೆಯ ಮುಂದೆ ಕೂತು ಬೆಂಕಿ ಕಾಯಿಸುವ ಕಾರ್ಯಕ್ರಮ. ಬೆಂಕಿಯುರಿಯ ತೊಯ್ದಾಟಕ್ಕೆ ತೂಕಡಿಕೆ ಬಂದಂತಾಗಿ, ಮೈ ನಿಗಿ ನಿಗಿ ಕೆಂಡದಂತಾದಾಗಲಷ್ಟೇ ಬಚ್ಚಲಿಗೆ ಇಳಿಯುವುದು. ಬಚ್ಚಲಿನ ಒಂದು ಪಾರ್ಶ್ವಕ್ಕೆ ಒಂದು ಪುಟ್ಟ ಕಿಟಕಿ. ಅದರಾಚೆಗೆ ವಿಶಾಲವಾದ ಮನೆಯ ಹಿತ್ತಲು. ಹಣ್ಣಿಗಾಗಿ ಅರಸಿ ಬರುತ್ತಿದ್ದ ಹಕ್ಕಿಗಳ ಹಿನ್ನೆಲೆ ಗಾಯನ ಮಹಾಮಜ್ಜನಕ್ಕೆ!! ಹಂಡೆಯಿಂದ ನೀರು ತೋಡಲು ಬೇಸರ ಬಂದು ಕೈ ನೊಂದಾಗಲಷ್ಟೇ ಮೈ ಮೇಲೆ ನೀರು ನಿಲ್ಲುತ್ತಿದ್ದದ್ದು. ಅಜ್ಜಿ ಕಲಸಿದ ಸೀಗೆಪುಡಿಯ ಘಾಟಿಗೆ ಸೀನುಗಳ ಸರಮಾಲೆ. ಹಂಡೆಯಲ್ಲಿ ಅಳಿದುಳಿದ ನೀರನ್ನ ಬರಿದು ಮಾಡಿ, ಅಜ್ಜಿಯ ಸೀರೆ ತುಂಡನ್ನು ತಲೆಗೆ ಸುತ್ತಿ ಹೊರ ಬರುವ ವೇಳೆಗೆ ಊಟದ ಸಮಯ!!!!! ಅಜ್ಜಿ ಮಾಡಿದ ರಾಗಿ ಮುದ್ದೆ, ಈರುಳ್ಳಿ ಹುಳಿ ಪಟ್ಟಾಗಿ ಹೊಡೆದು ಹೊದ್ದು ಮಲಗಿದಾ ಅಂದ್ರೆಬೆಲ್ಲದ ಅಚ್ಚಿನಂಥ ಸ್ನಾನದ ಮನೆಯಲ್ಲಿ ಅಭ್ಯಂಜನ(!!)ಕ್ಕೆ ಹೋಗುವ ಸಮಯವಾಗಿದೆ,

ಬರ್ಲಾ ...............


No comments: